ಕೇಳುವಿಕೆಗೆ ಸಹಾಯಕಗಳು

ಕೇಳುವಿಕೆ ಮಂದವಾಗಿರುವವರಿಗೆ ಒದಗಿಸುವ ಉಪಕರಣಗಳು (ಹಿಯರಿಂಗ್ ಏಡ್ಸ್). ಮಾನವನ ಶ್ರವಣೇಂದ್ರಿಯ ಹಲವು ಕಾರಣಗಳಿಂದ ಸರಿಯಾಗಿ ಕೆಲಸಮಾಡದೇ ಇರಬಹುದು. ಇದರ ಪರಿಣಾಮ ಕಿವುಡು. ಇದರಿಂದ ಕೇಳುವಿಕೆ ಮಂದವಾಗಿ ಇತರರಿಗೆ ಸಹಜವಾಗಿ ಕೇಳಿಸುವ ಶಬ್ದಗಳು ಕಿವುಡನಿಗೆ ಕ್ಷೀಣವಾಗಿ ಭಾಸವಾಗುತ್ತವೆ. ಅವನನ್ನು ಮಾತನಾಡಿಸುವಾಗ ಇತರರು ಗಟ್ಟಿಯಾಗಿ ಕಿರುಚಬೇಕಾಗುತ್ತದೆ; ಅವನ ಮಾತುಗಾರಿಕೆಯೂ ಹದಗೆಡುವುದುಂಟು. ಕಿವುಡಿನ ಅನನುಕೂಲತೆಯನ್ನು ನಿವಾರಿಸಲು ಶಸ್ತ್ರಚಿಕಿತ್ಸೆ ಮತ್ತು ಔಷಧೋಪಚಾರಗಳ ಜೊತೆಗೆ ಕೇಳುವಿಕೆಗೆ ಸಹಾಯಕಗಳಾದ ಹಲವಾರು ಉಪಕರಣಗಳು ಸಹ ನೆರವಾಗುತ್ತವೆ. ಇವು ಶಬ್ದಗಳನ್ನು ಬೃಹತ್ಕರಿಸಿ ಕಿವಿಯಲ್ಲಿ ಹೊರಭಾಗಕ್ಕೆ ಹೊಗಿಸುತ್ತವೆ. ಶ್ರವಣಸಹಾಯಕಗಳ ನಿರ್ಮಾಣಕ್ಕೆ ಮೊದಲು ಕಿವುಡರು ಕೊಂಬು, ಕೊಳವೆ ಇತ್ಯಾದಿಗಳನ್ನು ಉಪಯೋಗಿಸಿ ಶಬ್ದ ಹೆಚ್ಚಾಗಿ ಚದರಿಹೋಗದೆ ಕಿವಿಯನ್ನೇ ಹೆಚ್ಚಿನ ಸಾಂದ್ರತೆಯಿಂದ ಪ್ರವೇಶಿಸುವಂತೆ ಮಾಡುವುದರಿಂದ ಸ್ವಲ್ಪ ಪ್ರಯೋಜನವನ್ನು ಹೊಂದುತ್ತಿದ್ದರು. ಈ ಸಾಧನಗಳೂ 1936ರ ಸುಮಾರಿನಿಂದ ಉಪಯೋಗಕ್ಕೆ ಬಂದ ಶ್ರವಣಸಹಾಯಕ ನಳಿಗೆ (ಹಿಯರಿಂಗ್ ಏಡ್ ಟ್ಯೂಬ್) ಎಂಬ ಹೆಸರಿನ ಕಿರುಬೆರಳಿಗಿಂತ ಸಣ್ಣದಾದ ಎಲೆಕ್ಟ್ರಾನ್ ವಾಲ್ವ್‍ಗಳನ್ನು ಉಪಯೋಗಿಸಿಕೊಂಡು ನಿರ್ಮಿತವಾದ ಶ್ರವಣಸಹಾಯಕಗಳೂ ಈಗ ಮರೆಯಾಗಿವೆ. 1948ರಿಂದ ಈಚೆಗೆ ಟ್ರಾನ್ಸಿಸ್ಟರ್‍ಗಳಿಂದ ತಯಾರಿಸಲ್ಪಡುವ ಲಘುತರವಾದ ಅತಿ ಸಣ್ಣ ಶ್ರವಣಸಹಾಯಕಗಳು ಬಳಕೆಗೆ ಬಂದಿವೆ.

	ರಚನೆ : ಶ್ರವಣಸಹಾಯಕದಲ್ಲಿ ಮೂರು ಭಾಗಗಳಿವೆ. ಎಲ್ಲ ಭಾಗಗಳೂ ಚಿಕ್ಕದಾಗಿ ಹಗುರವಾಗಿರಬೇಕಾದುದು ಅಗತ್ಯ. ಮೊದಲ ಭಾಗ ಮೈಕ್ರೋಫೋನ್, ತನ್ನ ಮೇಲೆ ಬೀಳುವ ಶಬ್ದವನ್ನು ತದ್ರೂಪವಾದ ವಿದ್ಯುತ್ ವಿಭವಗಳನ್ನಾಗಿ ಪರಿವರ್ತಿಸುವುದೇ ಮೈಕ್ರೋಫೋನಿನ ಕರ್ತವ್ಯ.  ಹೀಗೆ ಜನಿತವಾದ ವಿದ್ಯುತ್ ವಿಭವಗಳನ್ನು ಪ್ರವರ್ಧಕ (ಆಂಪ್ಲಿಫೈಯರ್) ದೊಡ್ಡದನ್ನಾಗಿಸಿ ಇಯರ್‍ಫೋನಿನಲ್ಲಿ ಹಾಯಿಸುತ್ತದೆ. ಕಿವಿಯಲ್ಲಿ ಧರಿಸಲಾಗುವ ಇಯರ್‍ಫೋನ್ ವಿದ್ಯುತ್ಪ್ರವಾಹವನ್ನು ಮತ್ತೆ ಶಬ್ದವನ್ನಾಗಿ ಪರಿವರ್ತಿಸಿ ಕಿವಿಯ ಒಳಗೆ ಕಳುಹಿಸುತ್ತದೆ. ಹೀಗೆ ಶ್ರವಣ ಸಹಾಯಕ ಶಬ್ದವನ್ನು ಆಯ್ದು ದೊಡ್ಡದನ್ನಾಗಿ ಮಾಡಿ ಕಿವಿಗೆ ಮುಟ್ಟಿಸುತ್ತದೆ. ಇಯರ್‍ಫೋನಿನ ರಚನೆಯೂ ಮೈಕ್ರೋಫೋನಿನದರ ಹಾಗೆಯೇ ಇರುತ್ತದೆ. ಇದು ಮಾಡುವ ಕೆಲಸ ಮಾತ್ರ ತದ್ವಿರುದ್ಧ.

ಚಿತ್ರ-1

	ಇಯರ್‍ಫೋನಿನಲ್ಲಿ ಎರಡು ಬಗೆ : ವಾಯುವಾಹಕ, ಅಸ್ಥಿವಾಹಕ. ವಾಯುವಾಹಕ ಇಯರ್ ಫೋನನ್ನು ಕಿವಿಯಲ್ಲಿ ಧರಿಸುತ್ತಾರೆ. ಇದು ಶಬ್ದವನ್ನು ಕಿವಿಯ ಒಳಭಾಗಕ್ಕೆ ತಲುಪಿಸುತ್ತದೆ. ಒಳಗಿವಿಯ ದೋಷಗಳ ನಿವಾರಣೆಗೆ ಈ ವಿಧಾನ ಬಲು ಸೂಕ್ತ. ಸಾಮಾನ್ಯವಾಗಿ ಇಂಥ ಇಯರ್‍ಫೋನ್ ಹೆಚ್ಚಾಗಿ ಬಳಕೆಯಲ್ಲಿದೆ. ಅಸ್ಥಿವಾಹಕ ಇಯರ್‍ಫೋನನ್ನು ಕಿವಿಯ ಹಿಂದೆ ಇರುವ ಒಂದು ಮೂಳೆಯ ಹೊರಭಾಗಕ್ಕೆ ಜೋಡಿಸುತ್ತಾರೆ. ಶಬ್ದದ ಕಂಪನಗಳು ಅಸ್ಥಿವಾಹಕ ಇಯರ್‍ಫೋನಿನಿಂದ ಮೂಳೆಯ ಮೂಲಕ ಗಾಳಿಯ ಮಾಧ್ಯಮವಿಲ್ಲದೆಯೇ ಒಳಗಿವಿಗೆ ರವಾನೆಯಾಗುತ್ತವೆ. 

ಚಿತ್ರ-2

ಹೊರಗಿವಿಯಲ್ಲಿ ದೋಷವಿದ್ದಾಗ ಅಥವಾ ಶ್ರವಣಮಾಪನ ಪರೀಕ್ಷೆಯಲ್ಲಿ ಅಸ್ಥಿವಾಹಕ ಶ್ರವಣಮಾತ್ರ ಚೆನ್ನಾಗಿದ್ದಾಗ ಅಸ್ಥಿವಾಹಕ ಇಯರ್‍ಫೋನ್ ಉಪಯೋಗಕ್ಕೆ ಬರುತ್ತದೆ. ಇದಕ್ಕೆ ಪ್ರವರ್ಧಕದಿಂದ ಹೆಚ್ಚಿನ ಶಕ್ತಿಯನ್ನು ಒದಗಿಸಬೇಕಾಗುತ್ತದೆ. ಮಧ್ಯಕಿವಿಯ ದೋಷಗಳಿಗೆ ಎರಡೂ ವಿಧದ ಇಯರ್‍ಫೋನುಗಳೂ ಉಪಯೋಗಿಯಾಗುತ್ತವೆ.

	ಶ್ರವಣಸಹಾಯಕದ ಗಾತ್ರವನ್ನು ಕುಗ್ಗಿಸುವ ಕಾರ್ಯ ನಡೆದೇ ಇದೆ. ಮೈಕ್ರೋಫೋನ್, ಇಯರ್‍ಫೋನ್‍ಗಳನ್ನು ಸಣ್ಣಗಾತ್ರದಲ್ಲಿ ತಯಾರಿಸಲಾಗಿದೆ. ಟ್ರಾನ್ಸಿಸ್ಟರ್‍ಗಳ ಉಪಯೋಗದಿಂದ ಪ್ರವರ್ಧಕದ ಗಾತ್ರವೂ ಸಣ್ಣದಾಗಿದೆ. ಎರಡನೆಯ ಮಹಾಯುದ್ಧದ ಮೊದಲಿನಲ್ಲಿ ಬಳಕೆಯಲ್ಲಿದ್ದ ಎಲೆಕ್ಟ್ರಾನ್ ನಳಿಗೆ ಶ್ರವಣ ಸಹಾಯಕಗಳಿಗೆ ಇಂದಿನ ಸಣ್ಣ ಪಾಕೆಟ್ ಟ್ರಾನ್ಸಿಸ್ಟರ್ ರೇಡಿಯೋಗಳ ಗಾತ್ರ ಇತ್ತು.  ಇವಕ್ಕೆ 1 1/2 ವೋಲ್ಟಿನ ಮತ್ತು 22 ವೋಲ್ಟಿನ ಎರಡು ಬ್ಯಾಟರಿಗಳ ಅಗತ್ಯವೂ ಇತ್ತು.  ಟ್ರಾನ್ಸಿಸ್ಟರ್ ಪ್ರವರ್ಧಕ ಸಣ್ಣದಾಗಿರುವುದು ಮಾತ್ರವಲ್ಲ ಇದು ಬಳಸುವ ವಿದ್ಯುಚ್ಛಕ್ತಿಯೂ ಅತ್ಯಲ್ಪ. ಗುಂಡಿಯಷ್ಟೆ ಸಣ್ಣದಾದ ಮತ್ತು ಹೆಚ್ಚಿನ ಜೀವಿತಾವಧಿ ಇರುವ 1-3 ವೋಲ್ಟಿನ ಪಾದರಸದ ಸೆಲ್‍ಗಳನ್ನು ಇವುಗಳಲ್ಲಿ ಉಪಯೋಗಿಸುತ್ತಾರೆ. 

	ಫಿಲಿಪ್ಸ್ ಸಂಸ್ಥೆಯವರು ತಮ್ಮ ಫಿಲಿಪ್ಸ್ ಸೆಮಿಕಂಡಕ್ಟರ್ಸ್ (1962) ಎಂಬ ಕಿರುಹೊತ್ತಗೆಯಲ್ಲಿ ತೋರಿಸಿರುವ ಒಂದು ಶ್ರವಣಸಹಾಯಕದ ಮಂಡಲವನ್ನು ಚಿತ್ರ 1 ರಲ್ಲಿ ಕೊಡಲಾಗಿದೆ. ಇದರಲ್ಲಿ ನಾಲ್ಕು ಟ್ರಾನ್ಸಿಸ್ಟರ್‍ಗಳ ಸಹಾಯದಿಂದ ಮೈಕ್ರೋಫೋನ್‍ನಲ್ಲಿ ಜನಿತವಾದ (ಒ) ವಿದ್ಯುತ್ಪ್ರವಾಹಗಳನ್ನು ನಾಲ್ಕು ಹಂತಗಳಲ್ಲಿ ಪ್ರವರ್ಧಿಸಿ ಕೊನೆಗೆ ಇಯರ್‍ಫೋನ್ ಖಿನಲ್ಲಿ ಶಬ್ದವನ್ನು ಉಂಟುಮಾಡಲಾಗುತ್ತದೆ. ಮುಲ್ಲಾರ್ಡ್‍ರವರ ರೆಫರೆನ್ಸ್ ಮ್ಯಾನ್ಯುಯಲ್ ಆಫ್ ಟ್ರಾನ್ಸಿಸ್ಟರ್ ಸಕ್ರ್ಯೂಟ್ಸ್ (1961) ಎಂಬ ಪುಸ್ತಕದಲ್ಲಿ ಮೂರು ಟ್ರಾನ್ಸಿಸ್ಟರ್, ಮೂರು ರೆಸಿಸ್ಟರ್ ಮತ್ತು ಒಂದು ಕೆಪಾಸಿಟರ್‍ಗಳನ್ನು ಉಪಯೋಗಿಸಿರುವ ಶ್ರವಣಸಹಾಯಕದ ಮಂಡಲ ಇದೆ (ಚಿತ್ರ 2). ಈ ಮಂಡಲದಲ್ಲಿ ಉಪಯೋಗಿಸಿರುವ ಟ್ರಾನ್ಸಿಸ್ಟರ್‍ಗಳೂ ಸಣ್ಣ ಗಾತ್ರದವೂ (3-4ಮಿಮೀ. ಉದ್ದ 1-2 ಮಿಮೀ. ವ್ಯಾಸ). ಆದ್ದರಿಂದ ಇಡೀ ಪ್ರವರ್ಧಕವನ್ನೇ ಕನ್ನಡಕದ ಕಿವಿಯ ಮೇಲಿರುವ ಭಾಗದಲ್ಲಿಯೋ ತಲೆಗೂದಲಿನಲ್ಲಿ ಧರಿಸಿರುವ ಬ್ರೂಚಿನಲ್ಲಿಯೋ ಜೋಡಿಸಿರಬಹುದು. ಶ್ರವಣಸಹಾಯಕವನ್ನು ಧರಿಸಿರುವುದೇ ಗೋಚರವಾಗುವುದಿಲ್ಲ.

	ಆವರ್ತಾಂಕಪ್ರತಿಕ್ರಿಯೆ (ಫ್ರೀಕ್ವೆನ್ಸಿ ರೆಸ್ಪಾನ್ಸ್) : ಪ್ರತಿ ಪ್ರವರ್ಧಕ್ಕೂ ಪ್ರತಿ ಟ್ರಾನ್ಸ್‍ಡ್ಯೂಸರಿಗೂ (ಶಕ್ತಿರೂಪಾಂತರಕಾರಕ) ತನ್ನದೇ ಆದ ಆವರ್ತಾಂಕ ಪ್ರತಿಕ್ರಿಯೆ ಉಂಟು. ಕಡಿಮೆ ಮೌಲ್ಯದ ಆವರ್ತಾಂಕದಿಂದ ಹೆಚ್ಚಿನ ಮೌಲ್ಯದವುಗಳವರೆಗೆ ವಿವಿಧ ಆವರ್ತಾಂಕಗಳ ಒಂದೇ ಮಟ್ಟದ ಶಕ್ತಿಯನ್ನು ಒಂದು ಸಾಧನಕ್ಕೆ ಒದಗಿಸಿದಾಗ ಅದು ಈ ಶಕ್ತಿಯನ್ನು ಯಾವ ಯಾವ ಆವರ್ತಾಂಕಗಳಲ್ಲಿ ಯಾವ ಯಾವ ಮಟ್ಟಕ್ಕೆ ಹಿಗ್ಗಿಸುವುದು ಅಥವಾ ಕುಗ್ಗಿಸುವುದು ಎಂಬುದನ್ನು ಅದರ ಆವರ್ತಾಂಕ ಪ್ರತಿಕ್ರಿಯೆ ತೋರಿಸುವುದು. ಸಾಮಾನ್ಯವಾಗಿ ಇದನ್ನು ಒಂದು ಗ್ರಾಫಿನ ಸಹಾಯದಿಂದ ಸೂಚಿಸಲಾಗುತ್ತದೆ x_ದಿಶೆಯಲ್ಲಿ ಆವರ್ತಾಂಕವನ್ನು (ಲಘುಗಣಕದ ಮಾನಕದಲ್ಲಿ) ಥಿ_ ದಿಶೆಯಲ್ಲಿ ಸಾಧನದ ಲಾಭವನ್ನೂ (ಜಃ ಅಥವಾ ವೋಲ್ಟೇಜ್ ರೂಪದಲ್ಲಿ) ಗುರುತಿಸಿದಾಗ ದೊರೆಯುವ ರೇಖೆಯೇ ಆವರ್ತಾಂಕ ಪ್ರತಿಕ್ರಿಯೆಯ ರೇಖೆ. ಮಾನವನ ಕಿವಿ ಸಾಮಾನ್ಯವಾಗಿ 20 ರಿಂದ 20,000 ಪ್ರತಿ ಸೆಕೆಂಡಿನ ಆವರ್ತಾಂಕದ ಶಬ್ದಗಳನ್ನು ಕೇಳಬಲ್ಲುದು. ಆದರೂ ಮಾತುಕತೆಗಳನ್ನು ವಿವರವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ 250-4,000 ಪ್ರತಿ ಸೆಕೆಂಡಿನ ಆವರ್ತಾಂಕದ ಶಬ್ದಗಳೇ ಸಾಕು. ಇದಕ್ಕಿಂತ ಕೆಳಗಿನ ಸಂಖ್ಯೆಯ ಶಬ್ದಗಳು ಶಬ್ದದ ಗುಣವನ್ನು ಮಾತ್ರ ಉತ್ತಮಗೊಳಿಸುತ್ತವೆ. ಹೆಚ್ಚಿನ ಆವರ್ತಾಂಕದ ಶಬ್ದಗಳಿಂದ ಹಿಸ್ ಕಾರದಿಂದ ಕೂಡಿದವು ಮಾತ್ರ ಉತ್ತಮಗೊಳ್ಳುತ್ತವೆ. ಸಂಗೀತದ ಗುಣವೂ ಆವರ್ತಾಂಕದ ವಿಸ್ತಾರದಿಂದ ಉತ್ತಮಗೊಳ್ಳುತ್ತದೆ. ಶ್ರವಣಸಹಾಯಕ 250-4,000 ಪ್ರತಿಸೆಕೆಂಡಿನ ಶಬ್ದಗಳಿಗೆ ಪ್ರತಿಕ್ರಿಯೆ ತೋರಿಸಿದರೆ ಸಾಕು.

	ಆದರೆ ಯಾವುದೇ ಒಂದು ವ್ಯಕ್ತಿಗೆ ಬೇಕಾದ ಶ್ರವಣಸಹಾಯಕ ಎಂಥದೆಂದು ನಿರ್ಧರಿಸಲು ಮೊದಲು ಆ ವ್ಯಕ್ತಿಯ ಶ್ರವಣಲೇಖನವನ್ನು (ಆಡಿಯೋಗ್ರಾಂ) ಪಡೆಯಬೇಕು. ಶ್ರವಣಮಾಪಕ (ಆಡಿಯೋಮೀಟರ್) ಎಂಬ ಯಂತ್ರದ ಸಹಾಯದಿಂದ ವ್ಯಕ್ತಿಯ ಕಿವಿಗಳ ಆವರ್ತಾಂಕ ಪ್ರತಿಕ್ರಿಯೆಯನ್ನು ಕಂಡುಹಿಡಿಯಲಾಗುತ್ತದೆ. ಕಿವಿಗಳು ಯಾವ ಯಾವ ಆವರ್ತಾಂಕಗಳಿಗೆ ಎಷ್ಟು ಎಷ್ಟು ಚುರುಕಾಗಿವೆ ಎಂಬುದನ್ನು ಈ ಯಂತ್ರ ಅಳೆಯುತ್ತದೆ. ಯಾವ ಆವರ್ತಾಂಕಗಳಲ್ಲಿ ಎಷ್ಟರಮಟ್ಟಿನ ಶ್ರವಣನಷ್ಟ ಇದೆ ಎಂಬುದನ್ನು ಜಃಗಳಲ್ಲಿ ತೋರಿಸುವ ಗ್ರಾಫನ್ನು ಶ್ರವಣಲೇಖನ ಎಂದು ಕರೆಯುತ್ತೇವೆ. ಶ್ರವಣನಷ್ಟ ಎಲ್ಲ ಆವರ್ತಾಂಕಗಳಲ್ಲಿಯೂ ಒಂದೇ ಸಮವಾಗಿದ್ದರೆ ಎಷ್ಟರಮಟ್ಟಿಗೆ ಶ್ರವಣನಷ್ಟವಿದೆಯೋ ಅಷ್ಟೇ ಜಃಯ ಲಾಭವನ್ನು ಎಲ್ಲ ಆವರ್ತಾಂಕಗಳಲ್ಲಿಯೂ ಸಮವಾಗಿ ಹೊಂದಿರುವ ಶ್ರವಣಸಹಾಯಕವನ್ನು ಉಪಯೋಗಿಸಬೇಕು (ಸಮಶ್ರುತಿಶ್ರವಣ ಸಹಾಯಕ). ಉದಾಹರಣೆಗೆ 50ಜಃಯ ಕಿವುಡು ಎಲ್ಲ ಆವರ್ತಾಂಕಗಳಲ್ಲಿಯೂ ಇದ್ದರೆ ಆಗ 250ರಿಂದ 4,000 ಪ್ರತಿಸೆಕೆಂಡಿನ ಆವರ್ತಾಂಕಗಳ ನಡುವೆ ಎಲ್ಲ ಸಮವಾಗಿ 50ಜಃ ಲಾಭವನ್ನು ಹೊಂದಿರುವ ಶ್ರವಣ ಸಹಾಯಕವನ್ನು ಉಪಯೋಗಿಸಬೇಕು. ಕಿವಿಯಲ್ಲಿ ಉಚ್ಚ ಆವರ್ತಾಂಕಗಳಲ್ಲಿ ಶ್ರವಣನಷ್ಟವಿದ್ದರೆ ಅದೇ ಆವರ್ತಾಂಕಗಳಲ್ಲಿ ಹೆಚ್ಚಿನ ಲಾಭವನ್ನು ಹೊಂದಿರುವ ಶ್ರವಣಸಹಾಯಕವನ್ನು (ತಾರಶ್ರುತಿ ಶ್ರವಣಸಹಾಯಕ) ಉಪಯೋಗಿಸಬೇಕು. ನಿಮ್ನ ಆವರ್ತಾಂಕದ ಶ್ರವಣನಷ್ಟವನ್ನು ಹೊಂದಿರುವ ಕಿವಿಗೆ ನಿಮ್ನ ಆವರ್ತಾಂಕಗಳಲ್ಲಿ ಹೆಚ್ಚಿನ ಲಾಭವನ್ನು ಹೊಂದಿರುವ ಶ್ರವಣಸಹಾಯಕವನ್ನು (ಮಂದಶ್ರುತಿ ಶ್ರವಣಸಹಾಯಕ) ತೊಡಿಸಬೇಕು. ಎಲ್ಲ ತರಹೆಯ ಕಿವುಡಿಗೂ ಮಟ್ಟವಾದ ಆವರ್ತಾಂಕ ಪ್ರತಿಕ್ರಿಯೆಯ ಶ್ರವಣಸಹಾಯಕವನ್ನು ಉಪಯೋಗಿಸಿದರೆ ಶ್ರವಣನಷ್ಟವಿಲ್ಲದೆ ಇರುವ ಆವರ್ತಾಂಕದ ಶಬ್ದಗಳು ಅತಿ ಹೆಚ್ಚಿನ ಶಕ್ತಿಯಮಟ್ಟದಲ್ಲಿ ಕಿವಿಯನ್ನು ಪ್ರವೇಶಿಸಿ ಅಪಾಯವನ್ನು ಉಂಟುಮಾಡುತ್ತವೆ. ಆದ್ದರಿಂದ ಕಿವಿಯ ಮತ್ತು ಶ್ರವಣಸಹಾಯಕದ ಆವರ್ತಾಂಕ ಪ್ರತಿಕ್ರಿಯೆಗಳು ಪರಸ್ಪರ ಪೂರಕವಾಗಿರಬೇಕು (ಚಿತ್ರ 3 ನೋಡಿ).

	ಶ್ರವಣಸಹಾಯಕದ ಲಾಭ : ಕಿವಿಯ ಶ್ರವಣನಷ್ಟ 30ಜಃ ಗಿಂತ ಕಡಿಮೆಯಾಗಿದ್ದರೆ ಶ್ರವಣಸಹಾಯಕ ಅಷ್ಟು ಉಪಯೋಗಕಾರಿಯಾಗಲಾರದು. ಏಕೆಂದರೆ ಅತಿ ನಿಶ್ಯಬ್ದವಾದ ಆವರಣಗಳನ್ನು ಬಿಟ್ಟರೆ ಇತರ ಸ್ಥಳಗಳಲ್ಲಿ ಸುತ್ತಮುತ್ತಲಿನ ಗದ್ದಲವೇ 30ಜಃ ಗಿಂತ ಹೆಚ್ಚಿನ ಶಕ್ತಿಯುಳ್ಳದ್ದಾಗಿರುತ್ತದೆ. ಶ್ರವಣಸಹಾಯಕದಲ್ಲಿಯೂ ಸುಮಾರು ಇದೆ ಮಟ್ಟದ ಗಲಭೆ ಜನಿಸುತ್ತಿರುತ್ತದೆ. ಆದ್ದರಿಂದ 30ಜಃ ಗಿಂತ ಕ್ಷೀಣವಾದ ಶಬ್ದಗಳು ಈ ಗಲಭೆಗಳಲ್ಲಿ ಮುಳುಗಿ ಹೋಗುವುವು. ಹೀಗೆಯೇ 95 ಜಃ ಗಿಂತ ಹೆಚ್ಚಿನ ಕಿವುಡು ಇದ್ದರೂ ಶ್ರವಣಸಹಾಯಕ ನಿರುಪಯೋಗಿಯಾಗುತ್ತದೆ. ಏಕೆಂದರೆ ಆಗ ಶ್ರವಣಸಹಾಯಕದ ಲಾಭ ಶಬ್ದವನ್ನು 120 ಜಃ ಗಿಂತ ಹೆಚ್ಚಿನದನ್ನಾಗಿ ಮಾಡುವುದರಿಂದ ಕಿವಿಯಲ್ಲಿ ನೋವು ಉಂಟಾಗುವುದೇ ಹೊರತು ಶಬ್ದ ಕೇಳಿಸುವುದಿಲ್ಲ.

ಚಿತ್ರ-3

 ಇದು ಯಾವ ಆವರ್ತಾಂಕದಲ್ಲಿಯೂ ಆಗಬಾರದು. ಆದ್ದರಿಂದ ಶ್ರವಣಸಹಾಯಕ 30 ರಿಂದ 95 ಜಃ ವರೆಗಿನ ಶ್ರವಣನಷ್ಟವನ್ನು ಮಾತ್ರ ತುಂಬಿಕೊಡುವುದು. ಶ್ರವಣಸಹಾಯಕದ ಪ್ರಯೋಜನವನ್ನು ಅಂದಾಜು ಮಾಡಲು ನಿಶ್ಯಬ್ದವಾದ ಕೋಣೆಯಲ್ಲಿ ಬೇರೆಬೇರೆ ಮಟ್ಟದ ಬೇರೆ ಆವರ್ತಾಂಕದ ಶುದ್ಧಸ್ವರದ ಶಬ್ದಗಳನ್ನು ಪ್ರಯೋಗಿಸಿ ರೋಗಿ ಈ ಶಬ್ದಗಳನ್ನು ಬರಿಯ ಕಿವಿಯಿಂದಲೂ ಶ್ರವಣಸಹಾಯಕದ ನೆರವಿನಿಂದಲೂ ಎಷ್ಟರಮಟ್ಟಿಗೆ ಕೇಳುವನೆಂಬುದನ್ನು ನೋಡಬಹುದು. ಇನ್ನೊಂದು ವಿಧಾನದಲ್ಲಿ ಮೊದಲೇ ನಿರ್ಧರಿತವಾದ ಪಟ್ಟಿಯೊಂದರಿಂದ ಪದಗಳನ್ನು ಓದಿ ಹೇಳಿದಾಗ ರೋಗಿ ಅವುಗಳಲ್ಲಿ ಎಷ್ಟನ್ನು ಸರಿಯಾಗಿ ಗ್ರಹಿಸುತ್ತಾನೆ ಎಂಬುದನ್ನು ಶ್ರವಣಸಹಾಯಕವನ್ನು ಧರಿಸಿರುವಾಗ, ಧರಿಸದೆ ಇರುವಾಗ ಪರಿಗಣಿಸಿ ಈ ಯಂತ್ರದ ಪ್ರಭಾವವನ್ನು ಅಳೆಯಬಹುದು.

ಮುಂದೆ ಸಂಯುಕ್ತಮಂಡಲ (ಇಂಟೆಗ್ರೇಟೆಡ್ ಸರ್ಕೀಟ್) ಎಂಬ ಹೊಸ ತಂತ್ರದಿಂದ ಶ್ರವಣಸಹಾಯಕವನ್ನು ಅತಿಹ್ರಸ್ವರೂಪಕ್ಕೆ ತರುವುದು ಸಾಧ್ಯವಾದೀತು. ಆಗ ಮೈಕ್ರೊಫೋನ್ ಮತ್ತು ಇಯರ್‍ಫೋನ್‍ಗಳೇ ಶ್ರವಣಸಹಾಯಕದ ಅತಿದೊಡ್ಡ ಭಾಗಗಳಾಗುತ್ತವೆ.                                                        (ಎನ್.ಕೆ.ಎಸ್)

ದೇಹ ವಿಜ್ಞಾನದ ದೃಷ್ಟಿಯಿಂದ ಹೇಳುವುದಾದರೆ ಸದ್ದು ಹಿಡಿತ, ಆವರ್ತಾಂಕಗಳ ಮಾರುವರ್ತನೆ, ಇಳುವರಿ-ಇವು ಕೇಳುವ ಸಾಧನಗಳ ಸುಗುಣಗಳು. ಇವುಗಳೊಂದಿಗೆ ರೋಗಿಯ ಕಿವುಡಿನ ಬಗೆ, ಪ್ರಮಾಣಗಳಿಗೆ ತಕ್ಕಂತೆ ಕೇಳುವ ಸಾಧನವನ್ನು ಆರಿಸಿಕೊಳ್ಳಬೇಕು. ಒಂಟಿಗಿವಿ ಕಿವುಡಿಗಾಗಿ ಬಳಸುವ ಕ್ರಾಸ್ ಮಾದರಿಯೊಂದು ಹೊಸದಾಗಿ ಬಂದಿದೆ. ಸಾಮಾನ್ಯವಾಗಿ ಶ್ರವಣತಜ್ಞರೋ ಕಿವಿವೈದ್ಯರೋ ಕಿವಿಗೇಳಿಸುವ ಪರೀಕ್ಷೆಗಳನ್ನು ಮಾಡಿ ಶ್ರವಣಸಾಧನಗಳನ್ನು ನಿಯಮಿಸುವರು. ಮೈಸೂರಿನ ಅಖಿಲ ಭಾರತ ವಾಕ್‍ಶ್ರವಣ ಸಂಸ್ಥೆಯಲ್ಲೂ ಈ ಏರ್ಪಾಡು ಉಂಟು.

ವಯಸ್ಸು, ಹೆಣ್ಣುಗಂಡು ಎಂಬ ಭೇದವೆಣಿಸದೆ ಕಿವುಡರೂ ಮಂದಗಿವಿಯವರೂ ಯಾರೇ ಆಗಿರಲಿ ಎಲ್ಲರೂ ಕೇಳುವ ಸಾಧನವನ್ನು ಹಾಕಿಕೊಳ್ಳಬೇಕು. ಒಬ್ಬೊಬ್ಬನಿಗೆ ಒಂದೊಂದು ತೆರನಾಗಿ ಅನುಕೂಲವಾದರೂ ಈ ಸಾಧನದಿಂದ ಎಲ್ಲರಿಗೂ ಅನುಕೂಲ ಇದ್ದೇ ಇರುವುದು. ಕೆಲವು ಬಗೆಗಳ ಕಿವುಡಿನಲ್ಲಿ ಇದನ್ನು ಹಾಕಿಕೊಂಡರೆ ಸುಖವಿಲ್ಲ. ಆ ನಿರ್ಧಾರವನ್ನು ಪರಿಣತರಿಗೆ ಬಿಡಬೇಕು. ಕಿವುಡ ಮಗುವಿನ ಕಲಿಕೆಗೆ ಕೇಳುವ ಸಾಧನ ಬಲು ಮುಖ್ಯ. ವೈದ್ಯದಿಂದಾಗಲಿ ಶಸ್ತ್ರಕ್ರಿಯೆಯಿಂದಾಗಲಿ ಸರಿಪಡಿಸಲಾಗದ ಕಿವುಡು ಗೊತ್ತಾದ ಮೇಲೆ ಮಗು ಯಾವಾಗಲೂ ಕೇಳುವ ಸಾಧನವನ್ನು ಹಾಕಿಕೊಂಡಿರಲೇಬೇಕು. ಮಗುವಿಗೆ ಬೇಕೆನಿಸಿದಾಗ ಅದಕ್ಕೆ ಇಲ್ಲವಾದರೆ ಕೇಳುವ ಸಾಧನ ಕೆಲಸಕ್ಕೆ ಬಾರದ್ದೆನಿಸುತ್ತದೆ. ಇಂದಿನ ಶಿಕ್ಷಣಪರಿಣತರ ಅಭಿಪ್ರಾಯದಲ್ಲಿ ಕಿವುಡಾಗಿರುವುದು ಗೊತ್ತಾದರೆ ಹಸುಗೂಸಿಗೂ ಕೇಳುವ ಸಾಧನವನ್ನು ಹಾಕಬೇಕು.                                            (ಎಂ.ಎನ್.ವಿ.ಎಂ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ